ರಿಪ್ಪನ್, ಜಾರ್ಜ್ ಫ್ರೆಡರಿಕ್ ಸ್ಯಾಮ್ಯುಯಲ್ ರಾಬಿನ್ಸನ್
1827-1909. ಬ್ರಿಟಿಷ್ ರಾಜಕಾರಣಿ, ಆಡಳಿತಗಾರ, ಬ್ರಿಟನ್ನಿನ ಪ್ರಧಾನ ಮಂತ್ರಿಯಾಗಿದ್ದ (1827-28) ಭಾರತದ ವೈಸ್‍ರಾಯ್ (1880-84). ರಿಪ್ಪನ್ ಫ್ರೆಡರಿಕ್ ಜಾನ್ ರಾಬಿನ್ಸನ್ ಇವನ ತಂದೆ.

ಈತ 1852 ರಿಂದ 1859ರ ವರೆಗೆ ಬ್ರಿಟನ್ನಿನ ಸಂಸತ್ ಸದಸ್ಯನಾಗಿದ್ದ. ಮುಂದೆ 1859-61ರಲ್ಲಿ ಯುದ್ಧ ವಿಭಾಗದ ಸಹಾಯಕ ಮಂತ್ರಿಯಾಗಿ, 1961-63ರಲ್ಲಿ ಭಾರತಕ್ಕೆ ಸಂಬಂಧಪಟ್ಟ ಉಪಸಚಿವನಾಗಿ, 1863ರಲ್ಲಿ ಪಾಮರ್‍ಸ್ಟನ್‍ನ ಮಂತ್ರಿಮಂಡಲದಲ್ಲಿ ಯುದ್ಧಮಂತ್ರಿಯಾಗಿ, 1866ರಲ್ಲಿ ಭಾರತದಲ್ಲಿ ಮಂತ್ರಿಯಾಗಿ ಸೇವೆಸಲ್ಲಿಸಿದ. ಗ್ಲಾಡ್‍ಸ್ಟನ್‍ನ ಕಾಲದಲ್ಲಿ ಪರಿಷತ್ತಿನ ಅಧ್ಯಕ್ಷನಾದ (1868) ಈತ 1874ರಲ್ಲಿ ರೋಮನ್ ಕ್ಯಾತೊಲಿಕ್ ಮತಕ್ಕೆ ಮತಾಂತರ ಹೊಂದಿ ಆರು ವರ್ಷಗಳ ವರೆಗೆ ಸಾರ್ವಜನಿಕ ಕೆಲಸಗಳಿಂದ ದೂರವಿದ್ದ.

ಈತ ಏಪ್ರಿಲ್ 1880ರಲ್ಲಿ ಭಾರತದ ವೈಸ್‍ರಾಯ್ ಆದ. ಅಬ್ದುಲ್, ರಹಮಾನ್ ಖಾನ್‍ನನ್ನು ಆಪ್ಘಾನಿಸ್ತಾನದ ಅಮೀರನೆಂದು ಒಪ್ಪಿಕೊಳ್ಳುವು ದರೊಡನೆ ಈತ ಎರಡನೆಯ ಆಫ್‍ಘನ್ ಯುದ್ಧವನ್ನು ನಿಲ್ಲಿಸಿದ. ಭಾರತದ ಒಳಾಡಳಿತದಲ್ಲಿ ಉದಾರ ಭಾವನೆ ತಂದ. ಉಪ್ಪಿನ ಮೇಲಿನ ತೆರಿಗೆಯನ್ನು ಕಡಿಮೆ ಮಾಡಿದ. ಸ್ಥಳೀಯ ಚುನಾಯಿತ ಸರ್ಕಾರಗಳಿಗೆ ಹೆಚ್ಚು ಅಧಿಕಾರವನ್ನು ನೀಡಿದ. ಭೂ ತೆರಿಗೆಯನ್ನು ಸ್ಥಿರಗೊಳಿಸುವಲ್ಲಿ ವಿಫಲನಾದ. ದೇಶೀಯ ಪತ್ರಿಕೆಗಳ ಮೇಲೆ 1878ರಲ್ಲಿ ಹೊರಿಸಿದ್ದ ದೇಶೀಯ ಭಾಷಾ ಪತ್ರಿಕಾ ಕಾನೂನನ್ನು ತೆಗೆದುಹಾಕಿ ಇಂಗ್ಲಿಷ್ ಪತ್ರಿಕೆಗಳಂತೆಯೇ ಸಮಾನಾಧಿಕಾರ ನೀಡಿದ. ಕಾರ್ಮಿಕರ ಸ್ಥಿತಿಗತಿ ಸುಧಾರಣೆಗಾಗಿ 1881ರಲ್ಲಿ ಒಂದು ಕಾನೂನು ಮಾಡಿದ. ಅದುವರೆಗೂ ಬ್ರಿಟಿಷರ ಆಳ್ವಿಕೆಗೆ ಒಳಪಟ್ಟಿದ್ದ ಮೈಸೂರು ರಾಜ್ಯವನ್ನು 1881ರಲ್ಲಿ ರಾಜಮನೆತನದವರಿಗೆ ಹಿಂದಿರುಗಿಸಿದ. ಭಾರತದ ನ್ಯಾಯಧೀಶರು ಯುರೋಪಿಯನ್ನರನ್ನೂ ವಿಚಾರಣೆಗೆ ಗುರಿಪಡಿಸಿ ತೀರ್ಪು ನೀಡಬಹು ದೆಂಬ ಕಾನೂನು ಮಾಡಿದ. ಈತ 1884ರಲ್ಲಿ ಹುದ್ದೆ ತ್ಯಜಿಸಿ ಇಂಗ್ಲೆಂಡಿಗೆ ಹಿಂದಿರುಗಿದ. ಅಲ್ಲಿ ಅನೇಕ ದೊಡ್ಡ ಹುದ್ದೆಗಳ ಅಧಿಕಾರ ಪಡೆದ. ಈತ ಲಂಡನ್ನಿನಲ್ಲಿ 1909ರಲ್ಲಿ ನಿಧನನಾದ.	

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ